ಭಾವ ತುಂಬಿ ಭಜಿಸುವೆನು

ಭಾವ ತುಂಬಿ ಭಜಿಸುವೆನು ದೇವಿ ಪಾಲಿಸೆ
ನೋವ ಮರೆಯುವಂಗೆ ಎನಗೆ ವರವ ಕರುಣಿಸೆ
ನಿನ್ನ ಪರಮ ಪಾದದಲ್ಲಿ ಶಿರವನು ಇರಿಸಿ
ತೊಳೆಯುವೆನು  ಕಣ್ಣೀರ ಧಾರೆಯ  ಸುರಿಸಿ     ||೧||

ಅಪರಾದವೇನನ್ನು  ನಾನು  ಗೈದಿಹೆನೆಂದು
ಪರಿಪರಿಯ ಬೇಗೆಯಲಿ  ಬೇಯಿಸುತಲಿರುವೆ
ಮತಿಗೇಡಿಯಾದೆನ್ನ   ತಪ್ಪುಗಳ ಮನ್ನಿಸುತ
ಮುನ್ನಡೆಸು ಹಾದಿಯನು ಸುಗಮಗೊಳಿಸು     ||೨||

ಭಾವದ ಭಯವದು ಎನ್ನ ಬದುಕ ನುಂಗಿದೆಯಮ್ಮ
ಅಭಯ ನೀಡಿ ಸಲಹು ಉಳಿಸು  ಕಾಯಮ್ಮ
ಬಾಳಿನಲಿ ಕವಿದಿರುವ ಕತ್ತಲೆಯ ಕಳೆಯಮ್ಮ
ಬೆಳಕನ್ನು  ನೀಡಮ್ಮ ನೀನೆ ಗತಿಯಮ್ಮ     ||೩||

ಸತ್ಯಧರ್ಮಗಳ  ಉಳಿಸು ಸನ್ಮಾರ್ಗದಲಿ ನಡೆಸು
ಸಜ್ಜನರ  ಉಳಿಸು  ದುರುಳರನ್ನು ಮಣಿಸು
ಒದಗಿರುವ  ದರಿತಗಳ ದೂರಮಾಡೈ ತಾಯೆ
ಶಿಷ್ಟ ರಕ್ಷಕಿಯಾಗಿ ಎಲ್ಲರನು ಕೈ ಹಿಡಿಯೆ     ||೪||