ಓಂಕಾರ ಪರಬ್ರಹ್ಮೆ

ಓಂಕಾರ  ಪರಬ್ರಹ್ಮೆ  ಓ  ಮಹಾಮಾತೆ
ಪ್ರಣವ  ಸ್ವರೂಪಿಣಿಯೆ   ಶ್ರೀ ಶಕ್ತಿದಾತೆ
ಪರಮ ಪಾವನ ಹೃದಯೆ  ಶಂಕರ ಪ್ರೀತೆ
ಶರಣು ಬಂದಿಹೆವಮ್ಮ  ಶೋಭಿತೆ ಲಲಿತೆ     ||೧||

ತ್ರಿಮೂರ್ತಿಗಳ  ಹುಟ್ಟು ನಿನ್ನಿಂದಲಮ್ಮ
ತ್ರಿಲೋಕ  ಜನನಿಯೆ ನೀ ಸಲಹು  ನಮ್ಮ
ನೀ  ಕಾಳಿ  ನೀ ದುರ್ಗಾ  ನೀನೆ  ಸರ್ವೆಶ್ವರಿ
ನಂಬಿದವರನು  ಪೊರೆವ  ತಾಯೇ  ಈಶ್ವರಿ     ||೨||

ನಶ್ವರದ  ನರಜನುಮ ಸ್ಧಿರವೆಂದು ತಿಳಿದೆ
ಈಶ್ವರಿಯೆ  ಮದಮೋಹಭ್ರಮೆಗೆ  ಒಳಗಾದೆ
ಶಾಶ್ವತದ  ಸವಿಮಾತು  ಸಟೆಯೆoದು ಜರಿದೆ
ಪಶ್ಚಾತ್ತಾಪದಲಿ  ಬೆಂದೆ ಬಹು ನೊಂದೆ     ||೩||

ಅರಿಯದೇ  ಅಪರದಾಗೈದಿಹೆನು ತಾಯೆ
ಅರಿತು  ಬೇಡುತಲಿರುವೆ ಕೈ ಹಿಡಿದು ಕಾಯೆ
ಜಗದಾದಿಶಕ್ತಿಯೆ  ಓ  ಮಹಾಮಾಯೆ
ಮುನ್ನಿಸು  ಮುನ್ನಡೆಸು ಬೆಳಕಾಗೆ ಬಾರೆ     ||೪||